News

ಮಂಗಳೂರು: ರಾಜ್ಯ ಸರಕಾರದಿಂದ ಶಿರಾಡಿಯಲ್ಲಿ ಕಳಪೆ ಕಾಮಗಾರಿ-ಆರ್ ಟಿಐ ಕಾರ್ಯಕರ್ತರಿಂದ ಆರೋಪ

ಮಂಗಳೂರು, ಸೆ 25(SM): ಕೇಂದ್ರ ಸರಕಾರದ ಅನುದಾನದಲ್ಲಿ ರಾಜ್ಯ ಸರಕಾರವು ಶಿರಾಡಿಘಾಟ್‌ನಲ್ಲಿ ನಡೆಸಿದ ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿಯಾಗಿದ್ದು, ಇಲ್ಲಿ ಅವ್ಯವಹಾರ ನಡೆದಿದೆ ಎಂದು ಶಿರಾಡಿಯ ನೀತಿ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷರಾಗಿರುವ, ಆರ್‌ಟಿ‌ಐ ಕಾರ್ಯಕರ್ತರೂ ಆಗಿರುವ ಜಯನ್ ಇಚ್ಲಂಪಾಡಿ ಆರೋಪಿಸಿದ್ದಾರೆ.ಯೋಜನಾ ವರದಿಯಂತೆ ಕಾಮಗಾರಿ ಮಾಡದೇ ಬಿಲ್ ಪಾವತಿಸಲು ಆಗ್ರಹಿಸಲಾಗಿದೆ. ಶಿರಾಡಿ ಗುಂಡ್ಯದಿಂದ ೧ ಕಿಲೋ ಮೀಟರ್ ದೂರದವರೆಗೆ ಮತ್ತು ಇಲ್ಲಿನ ದೇವಿ ದೇವಸ್ಥಾನದ ಆಸುಪಾಸಿನಲ್ಲಿ ನಡೆಸಿದ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿದೆ. ಇದನ್ನು ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳಿಂದಲೇ ಇದರ ಅನುದಾನವನ್ನು ವಸೂಲಿ ಮಾಡಿ ಮರುಕಾಮಗಾರಿ ನಡೆಸಬೇಕೆಂದು ಎಂದು ಜಯನ್ ಇಚ್ಲಂಪಾಡಿ ಒತ್ತಾಯಿಸಿದ್ದಾರೆ.
ತಾನು ಈಗಾಗಲೇ ಶಿರಾಡಿಘಾಟ್ ಪ್ರದೇಶದಲ್ಲಿ ನಡೆದಿರುವ ಕಳಪೆ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಇಲ್ಲಿ ಕಾಂಕ್ರಿಟ್ ತಡೆಗೋಡೆ ಕಟ್ಟುವಲ್ಲೂ ಕಬ್ಬಿಣದ ಸರಳುಗಳನ್ನು ಯೋಜನಾ ವರದಿಯಲ್ಲಿ ಸೂಚಿಸಿದಂತೆ ಅಳವಡಿಸದೇ ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ತಾನು ಮುಖ್ಯಮಂತ್ರಿ ಕುಮಾರ ಸ್ವಾಮಿ, ಪ್ರಧಾನಿ ಮೋದಿ, ಕೇಂದ್ರ ಸಚಿವ ಗಡ್ಕರಿಯವರಿಗೂ ಮನವಿ ನೀಡಿದ್ದೇನೆ ಎಂದು ಜಯನ್ ಹೇಳಿದ್ದಾರೆ.