News

ಬೆಂಗಳೂರು: ಕೊಡಗಿನಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ನೀಡಲು ಸರಕಾರ ನಿರ್ಧಾರ

ಬೆಂಗಳೂರು, ಸೆ 25(SM): ಕಳೆದ ತಿಂಗಳು ಕೊಡಗು ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿಲು ಸರಕಾರ ನಿರ್ಧರಿಸಿದೆ. ಮಾಸಿಕ 10 ಸಾವಿರ ರೂಪಾಯಿ ಪರಿಹಾರ ಧನ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ವಸತಿ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, 'ಸಂತ್ರಸ್ತರಿಗೆ ಶಾಶ್ವತ ಮನೆಗಳು ನಿರ್ಮಾಣವಾಗುವ ತನಕ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ ಧನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ' ಎಂದು ಯ.ಟಿ.ಖಾದರ್ ಮಾಹಿತಿ ನೀಡಿದರು. 'ಕೊಡಗು ಜಿಲ್ಲೆಯಲ್ಲಿ ಸುರಿದ ಮಳೆ, ಪ್ರವಾಹದಿಂದಾಗಿ 700-800 ಕುಟುಂಬಗಳ ಮಂದಿ ನಿರಾಶ್ರಿತರಾಗಿದ್ದಾರೆ. ಕೊಡಗಿನಲ್ಲಿ ನೆರೆ ಸಂತ್ರಸ್ತರನ್ನು ಗುರುತಿಸಲಾಗಿದೆ. ಜಿಲ್ಲಾಧಿಕಾರಿಗಳು ನಿಗದಿಪಡಿಸುವ ಸ್ಥಳಗಳಲ್ಲಿ 6 ಲಕ್ಷ ವೆಚ್ಚದಲ್ಲಿ ಮಾದರಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ವಿವರಣೆ ನೀಡಿದರು.
ನಿರಾಶ್ರಿತರಾಗಿರುವ ಕುಟುಂಬಗಳಿಗೆ ಮಡಿಕೇರಿ ತಾಲೂಕಿನ 8 ಪರಿಹಾರ ಕೇಂದ್ರಗಳಲ್ಲಿ 291 ಕುಟುಂಬಗಳು ಆಶ್ರಯ ಪಡೆಯುತ್ತಿದ್ದಾರೆ. ಸೋಮವಾರಪೇಟೆಯ 1 ಪರಿಹಾರ ಕೇಂದ್ರಗಳಲ್ಲಿ 101 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 122 ಪುರುಷರು ಮತ್ತು 112 ಮಹಿಳೆಯರು ಸೇರಿದಂತೆ ಒಟ್ಟು 234 ಜನ ಸಂತ್ರಸ್ತರಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.