News

ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಅರಳಿತು ಕಮಲ - ಎಸ್. ಅಂಗಾರಗೆ ವಿಜಯದ ಮಾಲೆ

ಮಂಗಳೂರು, ಮೇ 15: ದಕ್ಷಿಣ ಕನ್ನಡ ಜಿಲ್ಲೆಯ ಮೀಸಲು ಕ್ಷೇತ್ರ ಸುಳ್ಯದಲ್ಲಿ ಶಾಸಕ ಎಸ್.ಅಂಗಾರ ಈ ಬಾರಿಯೂ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಪರಿಶಿಷ್ಟ ಜಾತಿಗೆ ಮೀಸಲಾದ ಸುಳ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಈ ಬಾರಿಯೂ ನೇರ ಸ್ಪರ್ಧೆ ನಡೆದಿತ್ತು. ಬಿಜೆಪಿ ಪಕ್ಷದಿಂದ ಹಾಲಿ ಶಾಸಕ ಬಿಜೆಪಿಯ ಎಸ್.ಅಂಗಾರ ಈ ಬಾರಿಯೂ ಸ್ಪರ್ಧಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಡಾ. ರಘು ಅಖಾಡಕ್ಕಿಳಿದಿದ್ದರು. ಕಳೆದ ಬಾರಿ ಅವರು ಕೆಲವೇ ಕೆಲವು ಮತಗಳ ಅಂತರಿಂದ ಸೋಲನ್ನಪ್ಪಿದ್ದರು.

ಈ ಬಾರಿಯ ಚುನಾವಣೆಯಲ್ಲಿಯೂ ಮತದಾರರು ಅಂಗಾರ ಕೈ ಹಿಡಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ. ರಘು ವಿರುದ್ಧ ಎಸ್.ಅಂಗಾರ ಈ ಬಾರಿ ಸ್ಪರ್ಧಿಸಿದ್ದು, 13,915ಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ವಿಜಯದ ನಗೆ ಬೀರಿದ್ದಾರೆ. 

1994, 99, 2004, 2008, 2013 ಹೀಗೆ ಸತತ 5 ಚುನಾವಣೆಗಳಲ್ಲಿ ಬಿಜೆಪಿಯ ಎಸ್ ಅಂಗಾರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅದರಲ್ಲೂ 2013ರಲ್ಲಿ ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳನ್ನು ಬಿಜೆಪಿ ಸೋತಾಗ ಗೆದ್ದ ಏಕೈಕ ಬಿಜೆಪಿ ಪಕ್ಷದ ಅಭ್ಯರ್ಥಿ ಅಂದರೆ ಅದು ಎಸ್ ಅಂಗಾರ. ಈ ಮೂಲಕ ಜಿಲ್ಲೆಯಲ್ಲಿ ಅವರು ಬಿಜೆಪಿಯ ಮರ್ಯಾದೆ ಉಳಿಸಿದ್ದರು. ಈ ಬಾರಿಯೂ ಗೆಲುವು ಸಾಧಿಸುವಲ್ಲಿ ಎಸ್ ಅಂಗಾರ ಯಶಸ್ವಿಯಾಗಿದ್ದಾರೆ.