News

ರಾಜ್ಯದಲ್ಲಿ ವಾಮ ಮಾರ್ಗದ ಮೂಲಕ ಜಯ ಪಡೆಯಲು ಬಿಜೆಪಿ ಯತ್ನಿಸುತ್ತಿದೆ: ಹರೀಶ್ ಕುಮಾರ್ ಕಿಡಿ

ಮಂಗಳೂರು, ಏ 14: ಈ ಬಾರಿ ಸಿದ್ದರಾಮಯ್ಯ ಸರಕಾರದ ಅಭಿವೃದ್ಧಿ ಮತ್ತು ಬಿಜೆಪಿಯ ಅಪಪ್ರಚಾರದ ನಡುವೆ ಚುನಾವಣಾ ಸಮರ ನಡೆಯಲಿದ್ದು ಮತದಾರರೇ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ಚೊಕ್ಕಬೆಟ್ಟುವಿನಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಅನ್ನ ಭಾಗ್ಯದಿಂದ ಹಿಡಿದು ಅನಿಲ ಭಾಗ್ಯದವರೆಗೆ ಅನೇಕ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಜಾರಿಗೊಳಿಸಿದ್ದಾರೆ. ದೇಶದ ಗಮನ ಸೆಳೆಯುತ್ತಿರುವ ರಾಜ್ಯದ ಚುನಾವಣೆಯನ್ನು ವಾಮ ಮಾರ್ಗದ ಮೂಲಕ ಜಯ ಪಡೆಯಲು ಬಿಜೆಪಿ ಯತ್ನಿಸಿದರೆ, ಕಾಂಗ್ರೆಸ್ ಅಭಿವೃದ್ಧಿ ಆಧಾರದಲ್ಲಿ ಮತದಾರರ ಮುಂದೆ ಹೋಗುತ್ತಿದೆ ಎಂದು ಹೇಳಿದರು.

ಶಾಸಕ ಮೊಯ್ದೀನ್ ಬಾವಾ ಮಾತನಾಡಿ, ಸುರತ್ಕಲ್ ಕ್ಷೇತ್ರ ಪ್ರತಿಷ್ಟಿತ ಪ್ರದೇಶ. ದೇಶದ ಬೃಹತ್ ಕಂಪನಿಗಳಿಂದ ಹಿಡಿದು ಬಂದರಿನವೆರೆಗಿನ ಕಾಂಗ್ರೆಸ್ ಸಾಧನೆ ಕಣ್ಣ ಮುಂದಿದೆ. ಇದೀಗ ಮೂಲ ಸೌಕರ್ಯ ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ. ಕಾಂಗ್ರೆಸ್‌ನ ಕೆಲಸ ಕೇವಲ ಅಭಿವೃದ್ಧಿ. ಇದನ್ನು ಮಾಡಿ ತೋರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ರಾಜ್ಯ ದೇಶದಲ್ಲೇ ಅಭಿವೃದ್ಧಿಯ ರಾಜ್ಯವಾಗಿ ಹೊರಹೊಮ್ಮಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಸರಕಾರದ ಸೌಲಭ್ಯವನ್ನು ಮನೆ ಮನೆಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.