News

ಮಂಗಳೂರು: ಹೆಡ್ ಕಾನ್‌ಸ್ಟೇಬಲ್ ಕಾರಿನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ - ಮಾನವೀಯತೆ ಮೆರೆದ ಪೊಲೀಸ್

ಮಂಗಳೂರು ಏ 13: ಗರ್ಭಿಣಿಯೊಬ್ಬರು ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಕಾರಿನಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಪ್ರಸಂಗ ನಗರದಲ್ಲಿ ನಡೆದಿದೆ.

ಮಂಗಳೂರು ಹೊರವಲಯದ ಕೋಟೆಕಾರು ಬೀರಿ ನಿವಾಸಿ ರವಿ ಅವರ ಕಾರಿನಲ್ಲಿ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ರವಿ ಅವರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತಿದ್ದಾರೆ.

ಹೆಡ್ ಕಾನ್‌ಸ್ಟೇಬಲ್ ರವಿ ಅವರು ಗುರುವಾರ ಮುಂಜಾನೆಯ ವೇಳೆ ತಮ್ಮ ಕಾರಿನಲ್ಲಿ ಮಕ್ಕಳನ್ನು ಎಕ್ಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದರು. ತಮ್ಮ ಕಾರನ್ನು ಎಕ್ಕೂರು ಕೇಂದ್ರೀಯ ವಿದ್ಯಾಲಯದ ಎದುರು ನಿಲ್ಲಿಸಿದಾಗ ರಿಕ್ಷಾರಿಂದ ನೌಷಾದ್ ಎಂಬ ವ್ಯಕ್ಯಿ ಓಡಿ ಬಂದು ರವಿ ಅವರಲ್ಲಿ ಸಹಾಯ ಕೇಳಿದ್ದಾರೆ. ರಿಕ್ಷಾದಲ್ಲಿ ಗರ್ಭಿಣಿಯೊಬ್ಬರು ನೋವಿನಿಂದ ಒದ್ದಾಡುತ್ತಿದ್ದಾರೆ. ದಯವಿಟ್ಟು ಸಹಾಯಮಾಡಿ. ಗರ್ಭಿಣಿ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ನೌಷಾದ್ ಕೇಳಿದಾಗ ರವಿ ಅವರು ತಕ್ಷಣ ಸ್ಪಂದಿಸಿ ಮಹಿಳೆಯನ್ನು ತನ್ನ ಕಾರಿನಲ್ಲಿಯೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ವೇಳೆ ಕಾರು ಪಂಪುವೆಲ್ ಜಂಕ್ಷನ್ ತಲುಪುತ್ತಿದ್ದಂತೆ ಗರ್ಭಿಣಿಯು ಗಂಡು ಮಗುವಿಗೆ ಕಾರಿನಲ್ಲಿಯೇ ಜನ್ಮ ನೀಡಿದ್ದಾರೆ. ನಂತರ ರವಿಯವರು ತಾಯಿ ಮತ್ತು ಮಗುವನ್ನು ಕಂಕನಾಡಿ ಖಾಸಗಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಇದೀಗ ರವಿ ಅವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.