News

ಉಳ್ಳಾಲ: ಬಾರ್‌ಗೆ ನುಗ್ಗಿ ಪುಂಡರ ಅಟ್ಟಹಾಸ - ಮದ್ಯದ ಬಾಟಲಿ ಜತೆ ನಗದು ಕಳವು

ಉಳ್ಳಾಲ, ಏ 13: ಕಿಡಿಗೇಡಿಗಳ ತಂಡವೊಂದು ಬಾರ್ ಒಳಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಮಂಗಳೂರು ಹೊರವಲಯದ ತಲಪಾಡಿ ಎಂಬಲ್ಲಿ ನಡೆದಿದೆ.

ಇಲ್ಲಿನ ಅತಿಥಿ ಬಾರ್ ಗೆ ನುಗ್ಗಿದ ಹತ್ತಕ್ಕೂ ಹೆಚ್ಚು ಮಂದಿಯಿದ್ದ ದುಷ್ಕರ್ಮಿಗಳ ತಂಡ ಬಾರ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಪುಂಡರು ಅಟ್ಟಹಾಸ ನಡೆಸಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.

ಸ್ಥಳೀಯ ಯುವಕರ ತಂಡ ಕ್ಷುಲ್ಲಕ ಕಾರಣಕ್ಕೆ ಈ ದಾಂಧಲೆ ನಡೆಸಿದೆ. ಈ ಹಿಂದೆಯೂ ಈ ಪುಂಡರ ತಂಡ ಬಾರ್ ಒಳಗೆ ನುಗ್ಗಿ ಸಣ್ಣಪುಟ್ಟ ಕಾರಣಕ್ಜೆ ಗಲಾಟೆ ನಡೆಸಿದ್ದರು ಎಂದು ದೂರಲಾಗಿದೆ. ಹೆಲ್ಮೆಟ್ ಮತ್ತು ಮುಖಕ್ಕೆ ಬಟ್ಟೆ ಧರಿಸಿ ಯುವಕರ ತಂಡ ಬಾರ್ ಗೆ ನುಗ್ಗಿದ್ದು, ಕ್ಯಾಶ್ ಕೌಂಟರ್ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲ, ಬಾರ್ ಕೌಂಟರ್ ಮೇಲೆಯೂ ಮದ್ಯದ ಬಾಟಲಿಗಳಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.

ಕಿಡಿಗೇಡಿಗಳು ಬಾರ್ ಒಳಗಿನ ಗಾಜು ಪುಡಿಗೈದು, ವಸ್ತುಗಳನ್ನು ಎತ್ತಿಹಾಕಿ ದಾಂಧಲೆ ನಡೆದ್ದಾರೆ. ಅಲ್ಲದೇ ಒಂದು ಲಕ್ಷ ನಗದು ಮತ್ತು ಮದ್ಯದ ಬಾಟಲಿಗಳನ್ನು ಕಳವು ಮಾಡಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.