News

ನಾನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದು ಇಷ್ಟಕ್ಕೆಲ್ಲಾ ಕಾರಣವಾಯಿತು - ಹದಿಯಾ

ಕೊಜಿಕ್ಕೋಡ್, ಮಾ 10: ಹದಿಯಾ ಅಲಿಯಾಸ್ ಅಖಿಲಾಳ ಮದುವೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಈಕೆ ಮೊದಲ ಬಾರಿಗೆ ಕೇರಳಕ್ಕೆ ಭೇಟಿ ನೀಡಿದ್ದಾಳೆ.

ಮಾಧ್ಯಮದವರೊಂದಿಗೆ ಮಾತನಾಡಿದ ಶಂಕಿತ 'ಲವ್ ಜಿಹಾದ್' ಪ್ರಕರಣದ ಸಂತ್ರಸ್ತೆ ಹದಿಯಾ, ಪ್ರತಿಯೊಬ್ಬ ನಾಗರಿಕನೂ ತನಗೆ ಇಷ್ಟ ಬಂದ ಧರ್ಮವನ್ನು ಅನುಸರಿಸಲು ಸಂವಿಧಾನದಲ್ಲಿ ಅವಕಾಶವಿದೆ. ನಾನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿರುವುದು ಇಷ್ಟಕ್ಕೆಲ್ಲಾ ಕಾರಣವಾಯಿತು. ಕೆಲ ಮುಸ್ಲಿಂ ಸಂಘಟನೆಗಳು ನಮಗೆ ಬೆಂಬಲ ನೀಡಲು ನಿರಾಕರಿಸಿದರು. ಆದರೆ ಪಿಎಫ್ಐ ನಮಗೆ ಬೆಂಬಲ ನೀಡಿತ್ತು ಎಂದು ತಿಳಿಸಿದ್ದಾರೆ.

24 ವರ್ಷದ ಅಖಿಲಾ ಅಶೋಕ್ ಶಫೀನಾ ಜಹಾನ್  ಅವರನ್ನು ವಿವಾಹವಾಗಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ ತಮ್ಮ ಮಗಳನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಹದಿಯಾ ತಂದೆ ಆರೋಪಿಸಿದ್ದರು. ಮಾತ್ರವಲ್ಲ ಶಫೀನ್ ಜಹಾನ್  ಭಯೋತ್ಪದಕ ಗುಂಪಿಗೆ ಸೇರಿದವರು ಎಂದು ದೂರಿದ್ದರು. ಆದರೆ ಕೋರ್ಟ್ ಹದಿಯಾ ಮತ್ತು ಜಹಾನ್ ಮದುವೆಯನ್ನು ಮರು ಊರ್ಜಿತಗೊಳಿಸಿತ್ತು. ಹದಿಯಾಳ ಒಪ್ಪಿಗೆ ಮೇರೆಗೇ ಈ ಮದುವೆ ನಡೆದಿದೆ ಎಂಬುದು ವಿಚಾರಣೆ ವೇಳೆ ಸುಪ್ರೀಂ ಕೋರ್ಟಿನ ಗಮನಕ್ಕೆ ಬಂದಿದೆ.

ಕೇರಳಕ್ಕೆ ಆಗಮಿಸಿರುವ ಹದಿಯಾ ದಂಪತಿ ತಮಿಳುನಾಡಿನ ಸೇಲಂಗೆ ತೆರಳುವ ಮುನ್ನ ಮೂರು ದಿನಗಳ ಕಾಲ ಕೇರಳದಲ್ಲಿ ನಿಲ್ಲಲಿದ್ದಾರೆ.