News

ನಾಳ: ಹಾಡು ಹಗಲೇ ಮನೆ ದೋಚಿದ ಕಳ್ಳರು

ಬೆಳ್ತಂಗಡಿ, ಫೆ 10 : ಸುಮಾರು 2 ಲಕ್ಷದ ಮೌಲ್ಯದ ಚಿನ್ನಾಭರಣಗಳನ್ನು ಹಾಡಹಗಲೇ ಮನೆಯೊಂದರಿಂದ ಕಳ್ಳತನ ಮಾಡಿರುವ ಘಟನೆ ನ್ಯಾಯತರ್ಪು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ನಾಳ ಎಂಬಲ್ಲಿನ ಉಮೇಶ್‌ಎಚ್. ಎಂಬುವರಿಗೆ ಸೇರಿದ ಅಮೃತವರ್ಷಿಣಿ ನಿಲಯದಿಂದ ಕಳ್ಳತನ ನಡೆದಿದೆ. ಮನೆಯಲ್ಲಿ ನಿವೃತ್ತ ಶಿಕ್ಷಕ ವಸಂತ ಅನಾರೋಗ್ಯದಿಂದಾಗಿ ಮಂಗಳೂರಿನ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಅವರ ಪತ್ನಿ ಅಲ್ಲೇ ಇದ್ದು ಗಂಡನನ್ನು ನೋಡಿಕೊಳ್ಳುತ್ತಿದ್ದರು. ಮಕ್ಕಳಾದ ಉಮೇಶ್ ಮತ್ತು ಸಂದೇಶ್‌ ತಂದೆಯನ್ನು ನೋಡುವ ಸಲುವಾಗಿ ಗುರುವಾರ ಮಂಗಳೂರಿಗೆ ಹೋಗಿದ್ದರು.ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ನಡೆದಿದೆ. ಮಲಗುವ ಕೋಣೆಯಲ್ಲಿದ್ದ ಕವಾಟುಗಳನ್ನು ಮುರಿದು ಅದರಲ್ಲಿದ್ದ ಐದುವರೆ ಪವನು ತೂಕದ ಮುತ್ತಿನ ಪದಕವಿದ್ದ ಚಿನ್ನದ ಸರ, ಚಿನ್ನದ ಓಲೆ, ಹವಳದ ಚಿನ್ನದ ಜೊತೆ ಬೆಂಡೋಲೆ, ಒಂದು ಜೊತೆ ಟಿಕ್ಕಿ ಬೆಂಡೋಲೆ, ಆನೆ ಹವಳದ ಉಂಗುರ, ಒಂದುವರೆ ಪವನಿನ ಚಿನ್ನದ ಸರ, ಅರ್ಧ ಪವನ್‌ನಿನ ಒಂದು ಉಂಗುರ ಹೀಗೆ ಒಟ್ಟು 8 ಪವನ್‌ತೂಕದ ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳುವಾಗಿವೆ. ಕಳ್ಳರು ಮನೆಯ ಪೂರ್ವ ಬದಿಯಕಿಟಕಿಯ ಸರಳುಗಳನ್ನು ಮುರಿದು ನುಗ್ಗಿದ್ದಾರೆ. ಪ್ರಕರಣ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದೆ.