News

ಕುಂದಾಪುರ: ಅರೆ ಬೆಂದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ

ಕುಂದಾಪುರ, ಫೆ 08: ಅರೆ ಬೆಂದ ಸ್ಥಿತಿಯಲ್ಲಿ ಅಪರಿಚಿತ ಶವವೊಂದು ಹಂಗಳೂರಿನ ನೇರಂಬಳ್ಳಿಯ ಗದ್ದೆಯ ಬಳಿ ಫೆ. 08ರ ಗುರುವಾರ ಪತ್ತೆಯಾಗಿದೆ. ಸುಮಾರು 40 ವರ್ಷ ಪ್ರಾಯದೊಳಗಿನ ಗಂಡಸಿನ ಶವ ಇದಾಗಿದ್ದು ಸುಟ್ಟ ಹಿನ್ನೆಲೆ ಶವದ ಗುರುತು ಪತ್ತೆ ಅಸಾಧ್ಯವಾಗಿದೆ. ಘಟನಾ ಸ್ಥಳ ಸಂಪೂರ್ಣ ಸುಟ್ಟು ಹೋಗಿದ್ದು, ಯಾರೋ ಈ ಮೊದಲೇ ಸ್ಥಳದಲ್ಲೇ ಸತ್ತು ಬಿದ್ದಿದ್ದು, ಗದ್ದೆಗೆ ಬೆಂಕಿ ಕೊಟ್ಟ ಹಿನ್ನೆಲೆ ಈ ಶವಕ್ಕೆ ಬೆಂಕಿ ತಗುಲಿ ಸುಟ್ಟು ಹೋಗಿರಬೇಕು ಎಂದು ಶಂಕಿಸಲಾಗಿದೆ. ಬುಧವಾರ ಗದ್ದೆಯನ್ನ ಶುಚಿಗೊಳಿಸುವ ಕಾರಣ ಗದ್ದೆಗೆ ಬೆಂಕಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಾಣಿಗಳು ಶವದ ಭಾಗಗಳನ್ನ ಹರಿದು ಹಾಕಿದ್ದು, ಚೆಲ್ಲಾಪಿಲ್ಲಿಯಾಗಿದೆ.

ಗುರುವಾರ ಕೂಲಿ ಕಾರ್ಮಿಕರೋರ್ವರು ಆ ಮಾರ್ಗದಲ್ಲಿ ಬರುತ್ತಿರುವ ಸಂದರ್ಭ ಶವವನ್ನ ನೋಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರಿಗೆ ಮಾಹಿತಿ ತಲುಪಿದೆ. ಮೇಲ್ನೋಟಕ್ಕೆ ಇದು ಕೊಲೆ ಪ್ರಕರಣವೆಂದು ಕಂಡು ಬಾರದೆ ಇದ್ದರೂ, ಅಲ್ಲಗಳೆಯುವಂತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶವದ ಗುರುತು ಪತ್ತೆಗೆ ಕುಂದಾಪುರ ಪೊಲೀಸರು ವಿಚಾರಣೆ ನಡೆಸುತ್ತಿದ್ದು. ಶವಪರೀಕ್ಷೆಗಾಗಿ ಕೆಎಂಸಿ ಮಣಿಪಾಲಕ್ಕೆ ಶವವನ್ನು ಕಳುಹಿಸಲಾಗಿದೆ. ಈ ಕುರಿತು ಕುಂದಾಪುರ ಠಾಣೆ ಪಿಎಸ್‌ಐ ಹರೀಶ್, ಮತ್ತು ಸಿಬ್ಬಂದಿಗಳು ಸ್ಥಳದಲ್ಲಿದ್ದು, ತನಿಖೆ ಮುಂದುವರಿಸಿದ್ದಾರೆ.