News

ಮಂಗಳೂರು ಮೂಲದ ಜೆಮಿಮಾ ರಾಡ್ರಿಗಸ್‌ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆ

ಮಂಗಳೂರು, ಜ 13:  ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿರುವ ಭಾರತ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಮಂಗಳೂರು ಮೂಲದ ಜೆಮಿಮಾ ರಾಡ್ರಿಗಸ್‌ ಮಿಂಚಲಿದ್ದಾರೆ.

ಜೆಮಿಮಾ ರಾಡ್ರಿಗಸ್ ಹುಟ್ಟಿದ್ದು, ಬೆಳೆದಿದ್ದು ಮುಂಬಯಿನಲ್ಲಿ. ಆದರೆ 17 ವರ್ಷದ ಜೆಮಿಮಾ ಅವರ ಮೂಲ ಮಂಗಳೂರು. ಭಾರತ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿರುವ ಇವರು ತಾವು ಮಂಗಳೂರಿನವರು ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಸದ್ಯ ಮುಂಬಯಿಯ ಬಾಂದ್ರಾ ನಿವಾಸಿಯಾಗಿರುವ  ಜೆಮಿಮಾ, ರಿಜ್ವಿ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ. ಇವಾನ್‌ ರಾಡ್ರಿಗಸ್‌ ಮತ್ತು ಲವಿಟಾ ದಂಪತಿಗಳ ಪುತ್ರಿಯಾದ ಇವರಿಗೆ ತಂದೆಯೇ ಮೊದಲ ಗುರು.  

ಬಾಲ್ಯದಿಂದಲೇ ಇವರಿಗೆ ಭಾರತ ಪರ ಆಡಬೇಕೆಂಬ ಕನಸಿತ್ತು. ಇದೀಗ ತಂಡಕ್ಕೆ ಆಯ್ಕೆಯಾಗಿರುವ ಜೆಮಿಮಾ ಅವರ ಕನಸು ನನಸಾಗಿದೆ. ಜೆಮಿಮಾ ರಾಡ್ರಿಗಸ್‌ ಕೇವಲ ಕ್ರಿಕೆಟ್ ಮಾತ್ರವಲ್ಲ ಹಾಕಿ ಆಟಗಾರ್ತಿಯೂ ಹೌದು. ಕ್ರಿಕೆಟ್‌ನಲ್ಲಿ ಹೆಚ್ಚಿನ ಆಸಕ್ತಿ ಇದ್ದುದರಿಂದ ಇವರು ಅಲ್ಲೇ ಭವಿಷ್ಯ ಕಂಡುಕೊಳ್ಳಲು ನಿರ್ಧರಿಸಿದರು. ಭಾರತ ಪರ ದ್ವಿಶತಕ ಗಳಿಸುವುದು ಇವರ ಮತ್ತೊಂದು ಕನಸು. 

ಕಿರಿಯರ ವಿಭಾಗದ ಕ್ರಿಕೆಟ್‌ನಲ್ಲಿ ಈಗಾಗಲೇ ದ್ವಿಶತಕ ಸಿಡಿಸಿ ಇತಿಹಾಸ ನಿರ್ಮಿಸಿರುವ ಜೆಮಿಮಾ ಅವರಿಗೆ ಭಾರತ ತಂಡದ ಪರ ಆಡಲು ಅವಕಾಶ ಸಿಕ್ಕಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.