News

ಮಂಜೇಶ್ವರ: ಅಯ್ಯಪ್ಪ ಮಾಲಾಧಾರಿ ಸಾವು

 

ಮಂಜೇಶ್ವರ ಜ 10 : ಹೊನ್ನಾವರದಿಂದ ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತ ಜ 9 ರ ಮಂಗಳವಾರ ಸಂಜೆ ಪೊಸೋಟು ರೈಲು ಹಳಿಯಲ್ಲಿ ಮೃತಪಟ್ಟಿದ್ದಾರೆ. ಹೊನ್ನಾವರ ಹಳದಿಪುರದಲ್ಲಿ ಆಟೋ ಚಾಲಕರಾಗಿರುವ ಅಣ್ಣಪ್ಪ ಶಿವಪ್ಪ ಗೌಡ (28) ಮೃತಪಟ್ಟವರು. ಇವರು 14 ಮಂದಿಯ ತಂಡದ ಜೊತೆ ಟ್ರಾವೆಲರ್‌ನಲ್ಲಿ ಶಬರಿಮಲೆಗೆ ಪ್ರಯಾಣಿಸುತ್ತಿದ್ದು ನಿನ್ನೆ ಸಂಜೆ ಪೊಸೋಟುಗೆ ತಲುಪಿದ್ದರು. ಈ ವೇಳೆ ಬಹಿರ್ದೆಸೆಗಾಗಿ ರೈಲು ಹಳಿ ಬಳಿ ತೆರಳಿದ್ದಾರೆ. ಈ ಸಮಯದಲ್ಲಿ ಮಂಗಳೂರಿನಿಂದ ಬರುವ ರೈಲುಗಾಡಿಯ ಗಾಳಿಯ ರಭಸಕ್ಕೆ ಅಣ್ಣಪ್ಪ ಸಮೀಪದ ವಿದ್ಯುತ್ ಕಂಬಕ್ಕೆಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.
ಇದರಿಂದಾಗಿ ಇವರ ಜೊತೆಗಿದ್ದ ಅಯ್ಯಪ್ಪ ಭಕ್ತರಿಗೆ ನಿನ್ನೆ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ತಂಗಲು ವ್ಯವಸ್ಥೆ ಮಾಡಲಾಯಿತು. ಇಂದು ಹೊನ್ನಾವರವರಿಂದ ಇವರ ಸಂಬಂಧಿಕರು ತಲುಪಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಬಳಿಕ ಉಳಿದವರು ಶಬರಿಮಲೆಗೆ ಪ್ರಯಾಣ ಮುಂದುವರಿಸಿದರು. ಮೃತರು ತಂದೆ ಶಿವಪ್ಪ, ತಾಯಿ ಲಕ್ಷ್ಮಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.