News

ಯೋಗರಾಜ್ ಭಟ್ ಸಿನಿಮಾಕ್ಕೆ ಕುಡ್ಲದ ಚೆಲುವೆ ಸೋನಲ್ ನಾಯಕಿಯಾಗಿ ಆಯ್ಕೆ

ಬೆಂಗಳೂರು, ಜ 9: ಎಕ್ಕಸಕ ತುಳು ಚಿತ್ರದ ಮೂಲಕ ಸಿ-ಟೌನ್ ಗೆ ಎಂಟ್ರಿ ನೀಡಿದ ಕುಡ್ಲದ ಕುವರಿ ಸೋನಲ್ ಮೊಂತೇರೊ ಅವರನ್ನು ನಿರ್ದೇಶಕ ಯೋಗರಾಜ್ ಭಟ್ ಹೊಸ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.  

ನಿರ್ದೇಶಕ ಯೋಗರಾಜ್ ಭಟ್ ಕೈಗೆತ್ತಿಕೊಂಡಿರುವ ಹೊಸ ಚಿತ್ರದಲ್ಲಿ ವಿಹಾನ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು ವಿಹಾನ್ ಗೆ ಜೋಡಿಯಾಗಿ ಸೋನಲ್ ಮೊಂತೇರೊ ಆಯ್ಕೆಯಾಗಿದ್ದಾರೆ. ಸೋನಲ್ ಮೊಂತೇರೊ ಈಗಾಗಲೇ ತುಳುವಿನ ಎಕ್ಕಾ ಸಕ್ಕಾ, ಪಿಲಿಬೈಲ್ ಯಮುನಕ್ಕ ಮತ್ತು ಜೈ ತುಳುನಾಡು ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಯೋಗರಾಜ್ ಭಟ್ ಅವರ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿ ಸದ್ದು ಮಾಡಲಿದ್ದಾರೆ.

ಸಿನಿಮಾ ರಂಗದಲ್ಲಿ ಸಾಕಷ್ಟೂ ಅವಕಾಶಗಳನ್ನು ಪಡೆದುಕೊಂಡು ಕೋಸ್ಟಲ್ ವುಡ್ ಸೇರಿದಂತೆ ಸ್ಯಾಂಡಲ್ ವುಡ್ ನಲ್ಲಿ ಛಾಪು ಮೂಡಿಸಿದ್ದ ಪ್ರತಿಭೆ ಸೋನಲ್. ಈಗಾಗಲೇ ತುಳು, ಕನ್ನಡ ಚಿತ್ರರಂಗದ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ಮೋಡಿ ಮಾಡಿಸಿದ್ದ ಸೋನಲ್ ಅವರಿಗೆ ಬಾಲಿವುಡ್ ನಿಂದಲೂ ಆಫರ್ ಬಂದಿತ್ತು. ಬಾಲಿವುಡ್​ನಲ್ಲಿ ಸಾಜನ್ ಚಲೇ ಸಸುರಾಲ್ ಚಿತ್ರದಲ್ಲಿ ಸೋನಲ್ ನಟಿಸಿದ್ದು, ಮುಂಬರುವ ದಿನಗಳಲ್ಲಿ ಚಿತ್ರ ತೆರೆ ಕಾಣಲಿದೆ.

ಯೋಗರಾಜ್ ಭಟ್ ಸಿನಿಮಾದಲ್ಲಿ ಹೆಚ್ಚಾಗಿ ಹೊಸ ಪ್ರತಿಭೆಗಳಿಗೆ ಅವಕಾಶ ಜಾಸ್ತಿ. ಅದರಂತೆ ಕರಾವಳಿ ಪ್ರತಿಭೆ ಸೋನಲ್ ನಿರ್ದೇಶಕ ಯೋಗರಾಜ್ ಭಟ್ ಸಿನಿಮಾಕ್ಕೆ ಆಯ್ಕೆಯಾಗಿದ್ದಾರೆ. ಕರಾವಳಿಯ ಬೆಡಗಿ ಸೋನಲ್ ಮೊಂತೇರೊ ತನ್ನ ನಟನೆಯಿಂದ ಮತ್ತು ಮುದ್ದಾದ ನಗುವಿನಿಂದ ನಟಿಸಿ ಎಲ್ಲಾ ಚಿತ್ರಗಳಲ್ಲಿ ಭೇಷ್ ಅನಿಸಿಕೊಂಡಿದ್ದು, ಇದೀಗ ಯೋಗರಾಜ್ ಭಟ್ ಸಿನಿಮಾಕ್ಕೆ ಆಯ್ಕೆಯಾಗಿರುವುದು ಮತ್ತೊಮ್ಮೆ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.