News

ಗಂಗೊಳ್ಳಿಯಲ್ಲಿ ಮತ್ತೊಂದು ಬೈಕ್‌ಗೆ ಬೆಂಕಿ- ಹೆಚ್ಚುವರಿ ಪೊಲೀಸ್ ಮೊಕ್ಕಾಂ

ಗಂಗೊಳ್ಳಿ ಜ 09: ಗಂಗೊಳ್ಳಿಯಲ್ಲಿ ಮತ್ತೊಂದು ಬೈಕ್‌ಗೆ ಬೆಂಕಿ ಹಚ್ಚಲಾಗಿದೆ. ಜ.9ರ ಬೆಳಗಿನ ಜಾವ 4.30ರ ಸುಮಾರಿಗೆ ಗಂಗೊಳ್ಳಿ ಮೀನುಮಾರುಕಟ್ಟೆ ರಸ್ತೆಯ ಬದರುದ್ದಿನ್ ಎನ್ನುವವರ ಬೈಕ್ ಗೆ ಬೆಂಕಿ ಹಚ್ಚಲಾಗಿದ್ದು, ಬೈಕ್ ಭಾಗಶಃ ಹಾನಿಯಾಗಿದೆ. ಗೋಪಾಲ ಶೇರುಗಾರ್ ಎನ್ನುವವರ ಕಟ್ಟಡದಲ್ಲಿ ಬದರುದ್ದಿನ್ ಎನ್ನುವವರು ಬಾಡಿಗೆಗೆ ಇದ್ದು, ಮನೆಯ ಹತ್ತಿರ ಅವರು ಬೈಕ್ ನಿಲ್ಲಿಸಿದ್ದು, ಬೆಳಗಿನ ಜಾವ ಬೈಕ್‌ಗೆ ಬೆಂಕಿ ಹಚ್ಚಲಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬೆಳಿಗ್ಗೆ ನೂರಕ್ಕೂ ಅಧಿಕ ಮಂದಿ ಸ್ಥಳದಲ್ಲಿ ಸೇರಿದ್ದು, ಒಂದು ರೀತಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ತಕ್ಷಣ ಸ್ಥಳಕ್ಕೆ ಡಿವೈಎಸ್‌ಪಿ ಪ್ರವೀಣ ನಾಯಕ್, ಸರ್ಕಲ್ ಇನ್ಸಪೆಕ್ಟರ್ ಪರಮೇಶ ಆಗಮಿಸಿದ್ದು, ಅಹಿತಕರ ಘಟನೆ ಸಂಭವಿಸದಂತೆ ಹೆಚ್ಚುವರಿ ಪೊಲೀಸ್‌ರನ್ನು ನಿಯೋಜಿಸಲಾಗಿದೆ.

ಭಾನುವಾರ ತಡರಾತ್ರಿ ಗಂಗೊಳ್ಳಿಯ ಜಾಮೀಯಾ ಮಸೀದಿ ಹಿಂಭಾಗದ ಸುಗ್ಗಿಬೈಲು ಎಂಬಲ್ಲಿ ಅಬ್ದುಲ್ ಮಜೀದ್ ಎಂಬುವರು ಮನೆಯ ಎದುರಿನಲ್ಲಿ ನಿಲ್ಲಿಸಿದ್ದ ಬೈಕಿಗೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು, ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಮರುದಿನವೇ ಈ ಘಟನೆ ನಡೆದಿದ್ದು ಗಂಗೊಳ್ಳಿಯಲ್ಲಿ ಸದ್ಯ ಬೂದಿ ಮುಚ್ಚಿದ್ದ ಕೆಂಡದ ವಾತಾವರಣ ನಿರ್ಮಾಣವಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.