News

ಹುಟ್ಟುಹಬ್ಬದ ದಿನವೇ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಮೂಡುಬಿದಿರೆ, ಜ 9: ಇಲ್ಲಿನ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವಿದ್ಯಾರ್ಥಿಯೊಬ್ಬ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಅಬ್ಬಿಗೆರೆ ಮೂಲದ ತೇಜಸ್ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಡೆತ್‍ನೋಟ್ ಬರೆದಿಟ್ಟು ಆಳ್ವಾಸ್ ಕ್ಯಾಂಪಸ್ ನ ನಂದಿನಿ ಹಾಸ್ಟೆಲ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತೇಜಸ್ ತಾಯಿಯನ್ನು ಕಳೆದುಕೊಂಡಿದ್ದು, ಈ ನೋವಿನ ಬಗ್ಗೆ ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ತಂದೆಗೆ ಬೆನ್ನು ನೋವು ಇದ್ದು, ತೇಜಸ್ ಇದರಿಂದಲೂ ನೊಂದುಕೊಂಡಿದ್ದನು. ಇದೀಗ ಪೊಲೀಸರು ಡೆತ್‍ನೋಟ್ ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ತೇಜಸ್ ತಾಯಿ ಈ ಹಿಂದೆಯೇ ಸಾವನ್ನಪ್ಪಿದ್ದು, ತಂದೆ ಹಾಗೂ ತಂದೆಯ ಎರಡನೇ ಹೆಂಡತಿ ಜ.8ರಂದು ತೇಜಸ್‍ ನನ್ನು ಭೇಟಿಯಾಗಿ ಮಾತನಾಡಿದ್ದರು. ಪೋಷಕರ ಜೊತೆ ತೇಜಸ್ ಹುಟ್ಟುಹಬ್ಬ ಆಚರಿಸಿದ್ದನು. ಈ ವೇಳೆ ತಂದೆ ಬೆನ್ನು ನೋವಿನ ಬಗ್ಗೆ ತೇಜಸ್ ಬಳಿ ಹೇಳಿದ್ದು, ಇದರಿಂದ ನೊಂದುಕೊಂಡಿದ್ದ. ಸೋಮವಾರ ರಾತ್ರಿ 7.30 ರ ಸುಮಾರಿಗೆ ತೇಜಸ್ ಹಾಸ್ಟೆಲ್‍ಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾನೆ.

ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.